Friday, July 31, 2020

ಎಲ್ಲಿ ನೋಡಿದರಲ್ಲಿ ರಾಮ / Yelli nodidaralli Rama

ಸಾಹಿತ್ಯ     : ಶ್ರೀ ಕನಕದಾಸರು  
ಗಾಯಕರು : ಶ್ರೀ ವಿದ್ಯಾಭೂಷಣರು   


ಧ್ವನಿಸುರಳಿಯ ಕೊಂಡಿ / Hear the song 

 

ಎಲ್ಲಿ ನೋಡಿದರಲ್ಲಿ ರಾಮ                                || || 
ಇದ ಬಲ್ಲ ಜಾಣರ ದೇಹದೊಳಗೆ ನೋಡಣ್ಣ           || . || 

ಕಣ್ಣೇ ಕಾಮನ ಬೀಜ
ಈ ಕಣ್ಣಿಂದಲೆ ನೋಡು ಮೋಕ್ಷ ಸಾಮ್ರಾಜ್ಯ
ಕಣ್ಣಿನ ಮೂರುತಿ ಬಿಗಿದು 
ಒಳಗಣ್ಣಿಂದಲೇ ದೇವರ ನೋಡಣ್ಣ                      || ||

ಮೂಗೇ ಶ್ವಾಸ ನಿಶ್ವಾಸ
ಮೂಗಿಂದಲೇ ಕಾಣೊ ಯೋಗ ಸಂನ್ಯಾಸ
ಮೂಗನಾದರೆ ವಿಶೇಷ
ಒಳಮೂಗಲಿ ನೋಡಣ್ಣ ಲೀಲಾವಿಲಾಸ                || ||

ಕಿವಿಯೇ ಕರ್ಮಕ್ಕೆ ದ್ವಾರ
ಕಿವಿಯಿಂದಲೇ ಕೇಳೋ ಮೋಕ್ಷದ ಸಾರ
ಕಿವಿಯೇ ಕರ್ಮ ಕುಠಾರ
ಒಳಗಿವಿಯಲ್ಲಿ ಕಾಣೊ ನಾದದ ಬೇರ                   || ||

ಬೊಮ್ಮ ಮಾಡಿದ ತನು ಬಿಟ್ಟು
ವಿಶ್ವಕರ್ಮನು ಮಾಡಿದ ಬೊಂಬೆಯನಿಟ್ಟು
ಸುಮ್ಮನೆ ಕೂಗುಗಳಿಟ್ಟು
ಅದನಂಬುವನೆಂಬೋನು ಹೋಹ ಕಂಗೆಟ್ಟು          || ||

ರೂಢಿಯೊಳಗೆ ಶುದ್ಧ ಮೂಢ
ಕಾಡುಕಲ್ಲುಗಳನ್ನು ನಂಬಬೇಡ
ನಾಡಾಡಿ ದೈವಗಳನೆಲ್ಲ
ನಮ್ಮ ಬಾಡದಾದಿ ಕೇಶವನೊಬ್ಬನೆ ಬಲ್ಲ               || ||

ಭಾವಾರ್ಥ:
ಈ ದೇವರನಾಮದಲ್ಲಿ ಶ್ರೀ ಕನಕದಾಸರು ಪಿಂಡಾಂಡದೊಳಗಿನ ರಾಮನ ಕಂಡ ಜ್ಞಾನಿಗಳು.
ಅವರ ಶರೀರವನ್ನು ಸಾಧನಕ್ಕಾಗಿ ಹೇಗೆ ಮೀಸಲಿಟ್ಟಿರುತ್ತಾರೆ,
ನಾವು ಹೇಗೆ ನಮ್ಮ ಇಂದ್ರಿಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು
ಎಂಬ ಗಾಢ ವಿಚಾರಧಾರೆಯನ್ನು  ವಿವರಿಸುತ್ತಾರೆ.
ಜೊತೆಗೆ,  ಸರ್ವಾಂತರ್ಯಾಮಿ ಹರಿಯೊಬ್ಬನೇ ಸರ್ವೋತ್ತಮ, ತತ್ತ್ವಗಳು ಸತ್ಯ,
ಮೌಢ್ಯಗಳ ಪರಮಾವಧಿಯನ್ನು ಹೇರುವ, ಮಿಥ್ಯೋಪಚಾರಗಳಲಿ ತನಗಿಷ್ಟ ಬಂದ ಜಡವಸ್ತುಗಳಿಗೆ
ದೈವತ್ವದ ಪಟ್ಟವನಿಟ್ಟು, ಹೆಸರನಿಟ್ಟು ಪಾಮರರನು ಅಧಮರಾಗಿಸಿ,
ನಂಬಿಸುವವರ ಬಗ್ಗೆ ಎಚ್ಚರಿಕೆಯ ಸಂದೇಶವನ್ನೂ ಕೊಟ್ಟಿದ್ದಾರೆ.

ಎಲ್ಲಿ ನೋಡಿದರಲ್ಲಿ ರಾಮ
ಇದ ಬಲ್ಲ ಜಾಣರ ದೇಹದೊಳಗೆ ನೋಡಣ್ಣ - 
ರಾಮದೇವರು ಸರ್ವಾಂತರ್ಯಾಮಿ ಅಂತ ತಿಳಿದು
ಎಲ್ಲದರಲ್ಲೂ ರಾಮದೇವರನ್ನು ಕಾಣುವ ಜ್ಞಾನಿಗಳ ದೇಹವನ್ನು ಒಮ್ಮೆ ಅವಲೋಕಿಸು

ಕಣ್ಣೇ ಕಾಮನ ಬೀಜ -
ಎಲ್ಲ ಆಸೆಗಳಿಗೆ ಕಣ್ಣೇ ಮೂಲ

ಈಕಣ್ಣಿಂದಲೆ ನೋಡು ಮೋಕ್ಷ ಸಾಮ್ರಾಜ್ಯ -
ಐಹಿಕ ಸುಖ/ಆಸೆಗಾಗಿ ಕಣ್ಣನ್ನು ಬಳಸದೆ, ಮೋಕ್ಷವನ್ನು ನೋಡಿ ಆಸೆಪಡು

ಕಣ್ಣಿನ ಮೂರುತಿ ಬಿಗಿದು -
ಹೊರಗಣ್ಣಿನಿಂದ ದೇವರ ಜಡಪ್ರತಿಮೆಯ ನೋಡಿ, ಸೆರೆಹಿಡಿದು

ಒಳಗಣ್ಣಿಂದಲೇ ದೇವರ ನೋಡಣ್ಣ -
ಆ ಮೂರುತಿಯ ಲಕ್ಷಣಗಳನು, ತನ್ನಂತರಂಗದೊಳಗಿಹ ಬಿಂಬಮೂರುತಿಯಲಿ ಚಿಂತಿಸಿ, 
ಸಚ್ಚಿದಾನಂದ ವಿಗ್ರಹವನು ನೋಡು (ಜ್ಞಾನಿಗಳು ನೋಡುತ್ತಾರೆ)

ಮೂಗೇ ಶ್ವಾಸ ನಿಶ್ವಾಸ -
ಜೀವೋತ್ತಮನಾದ ವಾಯುವಿಗೆ (ಉಸಿರಾಟಕ್ಕೆ) ನಾಸಿಕ ದ್ವಾರಗಳೇ (ಮೂಗೇ) ಪ್ರಧಾನ

ಈ ಮೂಗಿಂದಲೇ ಕಾಣೊ ಯೋಗ ಸಂನ್ಯಾಸ -
ಸರ್ವೋತ್ತಮನಾದ ಹರಿಯ ನೆಲೆಯಾಗಿಹ ಈ ದೇಹವೆಂಬ ದೇಗುಲದ ಸರಾಗ ಚಲನೆವಲನೆಗಾಗಿ,
ಹೇರಳವಾಗಿ ಜೀವೋತ್ತಮನಾದ ವಾಯುದೇವ, ಶ್ವಾಸಕೋಶದೊಳು ವ್ಯಾಪಿಸಲು,
ಪ್ರಾಣಾಯಾಮ, ಧ್ಯಾನ, ಯೋಗಾಸನ ಮುಂತಾದ ಕ್ರಿಯೆಗಳಿಂದ
ಮನದೊಳಗಿರ್ಪ ಮಹದೇವನನು ಸಂತಸಗೊಳಿಸಲಿರುವ ಸಾಧನ ಈ ಮೂಗು

ಮೂಗನಾದರೆ ವಿಶೇಷ -
ಮಾತು ಮನೆ ಕೆಡಿಸಿತು – ತೂತು ಒಲೆ ಕೆಡಿಸಿತು ಎಂಬ ಗಾದೆ ಮಾತಿನಂತೆ
ಅನವಶ್ಯಕ, ಹರಿಚರಿತೆಯಲ್ಲದ ಮಾತು, ಹರಟೆಗಳಿಂದ ತನು-ಮನ-ಧನ-ಇನ-ನಿಕೇತನಗಳು
ಕೆಡುತ್ತವೆ. ಇಂತಹ ನಕಾರಾತ್ಮಕ ವಿಚಾರಗಳಿಗೆ ಅವಾಹಕನಾದರೆ ಅಂದರೆ ಮೂಗನಾದರೆ
ಮನ ಹೃದಯಗಳು ಶಾಂತ ಚಿತ್ತದಿಂದುರತ್ತವೆ 
ಇನ        : ಭೂಮಿ
ನಿಕೇತನ  : ಮನೆ
ಅವಾಹಕ : ಮೂಕ, ಇನ್ಸುಲೇಟರ್

ಒಳಮೂಗಲಿ ನೋಡಣ್ಣ ಲೀಲಾವಿಲಾಸ -
ಮೇಲೆ ಹೇಳಿದ ಹಾಗೆ ನಡೆದುಕೊಂಡಿದ್ದೆ ಆದರೆ
ಹರಿ ಸರ್ವೋತ್ತಮ, ವಾಯು ಜೀವೋತ್ತಮರೆಂಬ ಔನತ್ಯತೆಯ ದಿವ್ಯ ಪರಿಮಳ, 
ಒಳಮೂಗಿನಿಂದ ಆಘ್ರಣಿಸುವ ಸೌಭಾಗ್ಯದ ಲೀಲೆ ಅರಿವಾಗುತ್ತದೆ          

ಕಿವಿಯೇ ಕರ್ಮಕ್ಕೆ ದ್ವಾರ + ಕಿವಿಯೇ ಕರ್ಮ ಕುಠಾರ -
ಕುಠಾರ : ಆಯುಧ ; ಕೊಡಲಿ 
ಈ ಎರಡು ಕರ್ಣಗಳ ದ್ವಾರ ಎರಡೂ ಸದ್ವಿಚಾರ-ದುರ್ವಿಚಾರಗಳಿಗೆ ತೆರೆದಿರುತ್ತದ್ದೆ.
ಈ ಕರ್ಣಗಳ ದ್ವಾರಕೆ ದುರ್ವಿಚಾರ ಸೋಸುವ ಜಾಲರಿಯನು/ತೆರೆಯನು ನಿನ್ನ ಮನದೊಳಗೆ ಸ್ಥಾಪಿಸಿ, ಸದ್ವಿಚಾರಧಾರೆ ವ್ಯಾಪಿಸುವಂತೆ ಮಾಡಿ, ಸುಕರ್ಮದತ್ತ ಸಾಗುವಂತೆ ಮಾಡಿಕೊ.

ಈ ಕಿವಿಯಿಂದಲೇ ಕೇಳೋ ಮೋಕ್ಷದ ಸಾರ -
ಸದ್ವಿಚಾರಧಾರೆಯಿಂದ ಸುಕರ್ಮದತ್ತ ಸಾಗಿ, ಭಗವತ್ರಚನೆ, 
ಮೋಕ್ಷದ ಸಾರಾಂಶ ಅರಿಯಲು ಬೇಕಾದ ಜ್ಞಾನಕ್ಕೆ ಕಿವಿಯು ಉತ್ತಮ ಸಾಧನ.

ಒಳಗಿವಿಯಲ್ಲಿ ಕಾಣೊ ನಾದದ ಬೇರ  -
ಒಳಗಿವಿಯೊಳು ಧ್ಯಾನದಿಂದ, ಓಂಕಾರ ನಾದದ ತರಂಗಗಳನು, ಅದರ ಮೂಲವನು ಸವಿ.

ಬೊಮ್ಮ ಮಾಡಿದ ತನುಬಿಟ್ಟು
ವಿಶ್ವಕರ್ಮನು ಮಾಡಿದ ಬೊಂಬೆಯನಿಟ್ಟು
ಸುಮ್ಮನೆ ಕೂಗುಗಳಿಟ್ಟು
ಅದನಂಬುವನೆಂಬೋನು ಹೋಹ ಕಂಗೆಟ್ಟು -  
ಬೊಮ್ಮ : ಬ್ರಹ್ಮ
ಹೋಹ : ಹೋಗಿ, ಇಳಿದು

ಬ್ರಹ್ಮದೇವರು ಮಾಡಿರುವ ಈ ಜೀವ ಇರುವ ದೇಹವೆಂಬ ದೇಗುಲವು ಬಿಟ್ಟು,
ವಿಶ್ವಕರ್ಮ : ಶಿಲ್ಪಿ ಮಾಡಿದ ಜಡ ವಿಗ್ರಹಗಳನು ಮುಂದಿಟ್ಟು,
ತನ್ನಂತರಂಗದೊಳಗಿರುವ ಶ್ರೀಹರಿಯ ಕಾಣದೆ,
ಅವಶ್ಯವಿಲ್ಲದ, ಸಲ್ಲದ ಸದ್ದಿನ ಭ್ರಮೆಯೊಳು
ನಂಬಿ, ಅದರೊಳು ಇಳಿದು, ಎಲ್ಲಿಯೂ ಅವನ ಕಾಣದೆ,
ಸಲ್ಲದೆ ಕಂಗೆಟ್ಟು ದಿಕ್ಕು ತಪ್ಪಿ ಹೋಗಿರುವೆ.

ರೂಢಿಯೊಳಗೆ ಶುದ್ಧ ಮೂಢ
ಈ ಕಾಡುಕಲ್ಲುಗಳನ್ನು ನಂಬಬೇಡ
ನಾಡಾಡಿ ದೈವಗಳನೆಲ್ಲ
ನಮ್ಮ ಬಾಡದಾದಿ ಕೇಶವನೊಬ್ಬನೆ ಬಲ್ಲ -          
ನಾಡಾಡಿ : ಸಾಮಾನ್ಯ
ಬಾಡ     : ಹಾವೇರಿ ಜಿಲ್ಲೆಯ, ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮ, ಕನಕದಾಸರ ಜನ್ಮಸ್ಥಳ

ಮೌಢ್ಯತೆಯ ಪರಮಾವಧಿಯನು ರೂಢಿಸಿಕೊಂಡು,
ದೇವರು ನಮ್ಮೊಳಗೇ ಇದ್ದಾನೆ ಎಂಬುದನು ಮರೆತು
ಅವನನ್ನು ಸಿಕ್ಕಸಿಕ್ಕ ಕಲ್ಲುಗಳಲ್ಲಿ
ಆ ದೇವರು ಈ ದೇವರು ಎಂದು ಸಿಕ್ಕ ಸಿಕ್ಕ ಹೆಸರುಗಳನ್ನಿಟ್ಟು
ದಿಕ್ಕುತಪ್ಪಿಸುವ ಬಂಡವಾಳಶಾಹಿಗಳನು ನಂಬಬೇಡ
ಇಂತಹ ಇತರೆ ಸಾಮಾನ್ಯ ದೈವಗಳನೆಲ್ಲ,
ಸರ್ವೋತ್ತಮನಾದ ನಮ್ಮ ಬಾಡದ ಆದಿಕೇಶವನೇ ಬಲ್ಲ
ಎಂಬ ಪ್ರೌಢ್ಯತೆ ಬೆಳಸಿಕೊಂಡು, ಜೀವನದಲಿ ಸಾರ್ಥಕ್ಯ ಕಾಣು
ಎಂದು ಶ್ರೀ ಕನಕದಾಸರು ಉಪದೇಶಿಸಿದ್ದಾರೆ.

      **ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**
                                   
                                          ***  ಜೈ ಶ್ರೀರಾಮ್ ***
==========================================================

Saahitya  : Sri Kanakadasaru
Singer     : Sri Vidyabhushanaru

elli noDidaralli rAma                                        || pa ||
ida balla jANara dehadLag noDaNNa                || a.pa ||

kaNNe kAmana bIja
I kaNNindale noDu mokSha sAmrAjya
kaNNina mUruti bigidu
OLagaNNindale devara noDaNNa                      || 1 ||

mUge shvAsa nishvAsa
I mUgindale kANo yoga sanyAsa
mUganAdare visheSha
OLa mUgali noDaNNa leelA vilAsa                     || 2 ||

kiviye karmakke dvAra
I kiviyindale keLo mokShada sAra
kiviye karma kuThAra
OLa giviyalli kANo nAdada bera                          || 3 ||

bomma mADida tanu biTTu
vishvakarmanu mADida boMbeyaniTTu
summane kUgugaLiTTu
ada naMbuva neMbonu hoha kangeTTu            || 4 ||

rUDhiyoLage shuddha mUDha
I kADukallugaLannu naMbabeDa
nADADi daivagaLanella
namma bADadAdi keshavanobbane balla         || 5 ||

                                  ***  Jai Sri Ram ***

Friday, July 24, 2020

ಜಯತು ಕೋದಂಡರಾಮ / Jayatu Kodanda Rama

ಸಾಹಿತ್ಯ     : ಶ್ರೀ ಪುರಂದರದಾಸರು 
ಗಾಯಕರು : ಶ್ರೀ ವಿದ್ಯಾಭೂಷಣರು   

ಧ್ವನಿಸುರಳಿಯ ಕೊಂಡಿ / Hear the song 
                                         
                                          
ಕಪಿಕಟಧುರೀಣಃ ಕಾರ್ಮುಕನ್ಯಸ್ತ ಬಾಣಃ
ಕ್ಷಪಿತದಿತಿಜಸೈನ್ಯಃ ಕ್ಷತಿಯೇಷು ಅಗ್ರಗಣ್ಯಃ ।
ಜಲಧಿರಚಿತಸೇತುಃ ಜಾನಕೀತೋಷಹೇತುಃ
ಪಥಿ ಪಥಿ ಗುಣಸಾಂದ್ರಃ ಪಾತು ಮಾಂ ರಾಮಚಂದ್ರಃ ||

ಜಯತು ಕೋದಂಡರಾಮ ಜಯತು ದಶರಥರಾಮ
ಜಯತು ಸೀತಾರಾಮ ಜಯತು ರಘುರಾಮ.             || ಪ ||

ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ
ಪ್ರೀತಿಯಿಂದಲೇ ತಂದು ಸಕಲ ಭೂತಳವ
ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ
ಭೀತಿಯನು ಬಿಡಿಸಿ ನೆರೆ ಕಾಯ್ದ ರಘುರಾಮ.              || ೧ ||

ಬಲಿಯೊಳು ದಾನವ ಬೇಡಿ ನೆಲನ ಈರಡಿ ಮಾಡಿ
ಛಲದಿಂದ ಕ್ಷತ್ರಿಯರ ಕುಲವ ಹೋಗಾಡಿ
ಲಲನೆಗೋಸುಗ ಬಂದ ನೆವದಿಂದ ರಾವಣನ
ತಲೆಗಳನು ಚೆಂಡಾಡಿ ಮೆರೆದ ರಘುರಾಮ                 || ೨ ||

ವಸುದೇವ ಸುತನೆನಿಸಿ ವನಿತೆಯರ ವ್ರತಗೆಡಿಸಿ
ಎಸೆವ ತುರಗವನೇರಿ ಮಲ್ಲರನು ಸವರಿ
ವಸುಧೆಯೊಳು ಪುರಂದರ ವಿಠಲನೀ ಪಾಲಿಸೈ
ಬಿಸಜಾಕ್ಷಯೋಧ್ಯ ಪುರವಾಸ ರಘುರಾಮ                 || ೩ ||

ಭಾವಾರ್ಥ:

* ಇದು ರಾಮದೇವರ ವಿಷ್ಣುವಿನ ದಶಾವತಾರ ಸ್ತುತಿ *

ಜಯತು ಕೋದಂಡರಾಮ ಜಯತು  ದಶರಥರಾಮ
ಜಯತು ಸೀತಾರಾಮ ಜಯತು ರಘುರಾಮ.          

ಜಯತು           : ಜಯವಾಗಲಿ 
ಕೋದಂಡ         : ಬಿಲ್ಲುಧನಸ್ಸು
ಕೋದಂಡರಾಮ : ಬಿಲ್ಲನು ಹಿಡಿದಿರುವ ರಾಮ
ದಶರಥರಾಮ    ದಶರಥ ರಾಜರ ಮಗ ರಾಮ
ಸೀತಾರಾಮ      : ಸೀತಾ ಪತಿ ರಾಮ
ರಘುರಾಮ        : ರಘುವಂಶ ರಾಮ
                      : ಇಕ್ಷ್ವಾಕು ವಂಶಿ (ಸೂರ್ಯವಂಶಿ) ರಘು -> ಅಜ -> ದಶರಥ -> ಶ್ರೀರಾಮ 

ತಮದೈತ್ಯನನು ಮಡುಹಿ: ಮತ್ಸ್ಯಾವತಾರ
ಬ್ರಹ್ಮನಿಂದ ವೇದಗಳನ್ನು ಅಪಹರಿಸಿದ ಹಯಗ್ರೀವಾಸುರ ನಾಮಕ ದೈತ್ಯನ ಸಂಹರಿಸಿದವನು
ಮತ್ಸ್ಯ : ಮೀನು

ಮಂದರಾಚಲ ನೆಗಹಿ : ಕೂರ್ಮಾವತಾರ
ಸಮುದ್ರ ಮಂಥನದ ಸಮಯದಲ್ಲಿ ಕೂರ್ಮಾವತಾರದಿ ಮಂದರಗಿರಿಯನೆತ್ತಿದವನು
ಮಂದರ : ದಟ್ಟವಾದ, ಸಾಂದ್ರವಾದ 
ಅಚಲ    : ಕದಲದ,ಅಲುಗದ, ಬೆಟ್ಟ, ಗಿರಿ 
ಕೂರ್ಮಾ : ಆಮೆ

ಪ್ರೀತಿಯಿಂದಲೇ ತಂದು ಸಕಲ ಭೂತಳವ: ವರಾಹಾವತಾರ
ವರಾಹಾವತಾರದಿ ಹಿರಣ್ಯಾಕ್ಷನನ್ನು ಸಂಹರಿಸಿ ಭೂಮಿಯನ್ನು ಉದ್ಧರಿಸಿದವನು
ವರಾಹ : ಹಂದಿ

ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ
ಭೀತಿಯನು ಬಿಡಿಸಿ ನೆರೆ ಕಾಯ್ದ ರಘುರಾಮ.  : ನರಸಿಂಹಾವತಾರ      
ಕಂಬದಿಂದ ಹೊರಗೆ ಬಂದು ಪ್ರಹ್ಲಾದನ ಭೀತಿ ಬಿಡಿಸಿದ ನರಸಿಂಹನು

ಬಲಿಯೊಳು ದಾನವ ಬೇಡಿ ನೆಲನ ಈರಡಿ ಮಾಡಿ: ವಾಮನಾವತಾರ
ಈರಡಿ : ಇಡೀ ಭೂಮಿಯನ್ನು ತನ್ನ ಎರಡು ಹೆಜ್ಜೆಗಳಿಂದ ಅಳೆದು
ವಾಮನನು ಬಲಿ ಚಕ್ರವರ್ತಿಯ ಹತ್ತಿರ 
ಮೂರು ಹೆಜ್ಜೆಯಷ್ಟು ದಾನವ ಬೇಡಿ, ಮೂರು ಹೆಜ್ಜೆಗಳನು ಇಡುತ್ತಾನೆ 

೧. ಭೂಮಿಯಿಂದ ಕೆಳಗಿನ ೭ ಲೋಕಗಳು
೨. ಭೂಮಿಯಿಂದ ಮೇಲಿನ ೭ ಲೋಕಗಳು
೩. ಬಲಿಯ ತಲೆ

ಬಲಿಯಲ್ಲಿ ಜೀವದ್ವಯ ಆವೇಶ ಇರುತ್ತದೆ 
ಬಲಿ ಎಂಬ ರಾಕ್ಷಸ ಹಾಗು ಬಲಿ ಎಂಬ ದೇವತೆ.. 
ರಾಕ್ಷಸನನ್ನು ತಮಸಿಗೆ ಅಟ್ಟಿ,
ಬಲಿಯನುದ್ಧರಿಸಿದ ವಾಮನನಾವತಾರಿ ಶ್ರೀಹರಿ 

ಛಲದಿಂದ ಕ್ಷತ್ರಿಯರ ಕುಲವ ಹೋಗಾಡಿ : ಪರಶುರಾಮಾವತಾರ
ತನ್ನ ತಂದೆ ಜಮದಗ್ನಿಯನ್ನು ಕೊಂದ ದುರಾಚಾರಿ ಕ್ಷತ್ರಿಯರನ್ನು (ರಾಜ ಕಾರ್ತವೀರ್ಯ) ಇಲ್ಲವಾಗಿಸಿದ ಪರಶುರಾಮ

ಲಲನೆಗೋಸುಗ ಬಂದ ನೆವದಿಂದ ರಾವಣನ
ತಲೆಗಳನು ಚೆಂಡಾಡಿ ಮೆರೆದ ರಘುರಾಮ : ಶ್ರೀರಾಮಾವತಾರ          

ಮಾರುವೇಷದಿ ಬಂದು, ಲಕ್ಷ್ಮಣರೇಖೆಯ ದಾಟುವನಂತೆ ಮಾಡಿ, 
ಸೀತಾಮಾತೆಯನು ಅಪಹರಿಸಿದ ದಶಮುಖ ರಾವಣನ 
ಚೆಂಡಾಡಿ ಅಸುನೀಗಿಸಿದ ಕೋದಂಡರಾಮ : ಶ್ರೀರಾಮ   

ಲಲನೆಗೋಸುಗ = ಲಲನೆಗೆ + ಓಸುಗ
ಲಲನೆಗೆ : ಹೆಣ್ಣಿಗೆ: ಸೀತೆಗೆ
ಓಸುಗ   : ಓಸ್ಕರ, ಸಲುವಾಗಿ
ಲಲನೆಗೋಸುಗ : ಸೀತೆಗೋಸ್ಕರ

ವಸುದೇವ ಸುತನೆನಿಸಿ : ಶ್ರೀಕೃಷ್ಣಾವತಾರ
ವಸುದೇವ ಸುತ : ವಸುದೇವನ ಮಗ 
ದುಷ್ಟ ಶಿಕ್ಷಣಾರ್ಥ, ಶಿಷ್ಟ ರಕ್ಷಣಾರ್ಥ  
ಅಧರ್ಮ ನಾಶಾರ್ಥ, ಧರ್ಮಸಂಸ್ಥಾಪನಾರ್ಥ  
ಅವತರಿಸಿದ ಪಾರ್ಥಸಾರಥಿ : ಶ್ರೀಕೃಷ್ಣ

ವನಿತೆಯರ ವ್ರತಗೆಡಿಸಿ : ಬೌದ್ಧಾವತಾರ
ವನಿತೆ : ಸ್ತ್ರೀ 
ತ್ರಿಪುರಾಸುರ ಮಹಾ ಪತಿವ್ರತೆ ಪತ್ನಿಯರನ್ನು ಮೋಹಿಸಿ, 
ಅವರ ಪತಿಯಂದಿರ ರಕ್ಷಣೆ ಸಲುವಾಗಿ ನೆಡೆಸುತ್ತಿದ್ದ ವ್ರತವ ಕೆಡಿಸಿ
ರುದ್ರದೇವರಿಗೆ ತ್ರಿಪುರಾಸುರ ವಧಿಸಲು ಸಹಾಯ ಮಾಡಿದವ 

ಎಸೆವ ತುರಗವನೇರಿ ಮಲ್ಲರನು ಸವರಿ: ಕಲ್ಕಿ ಅವತಾರ
ತುರಗ   : ಕುದುರೆ
ಮಲ್ಲರು : ದುರಾಚಾರಿಗಳು
ಸವರು  : ಕತ್ತರಿಸು (ಈ ದೇವರನಾಮಕ್ಕೆ)

ವಸುಧೆಯೊಳು ಪುರಂದರ ವಿಠಲನೀ ಪಾಲಿಸೈ
ವಸುಧೆ : ಭೂಮಿ
ಭೂಮಿಯಲ್ಲಿ ನೀನೇ ನಮ್ಮನ್ನು ಪಾಲಿಸಬೇಕು ಕಾಪಾಡಬೇಕು ಪುರಂದರವಿಠಲ

ಬಿಸಜಾಕ್ಷಯೋಧ್ಯ ಪುರವಾಸ ರಘುರಾಮ         
ಬಿಸಜ     : ಕಮಲ
ಬಿಸಜಾಕ್ಷ : ಕಮಲದ ಕಣ್ಣುಳ್ಳವನು : ಶ್ರೀರಾಮ

ಅಯೋಧ್ಯ ಪುರವಾಸ ನಾದ ಬಿಸಜಾಕ್ಷ ರಘುರಾಮ..
ದೇವರನಾಮ ಶ್ರೀಪುರಂದರದಾಸರು ಅಯೋಧ್ಯಾ ಕ್ಷೇತ್ರ ಸಂದರ್ಶಿಸಿದಾಗ
ಅಂತರಂಗದಲ್ಲಿ ಕಂಡ ಶ್ರೀರಾಮದೇವರ ರೂಪಗಳನ್ನು ವರ್ಣಿಸಿದ ಪರಿ.

**ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**
                                     
                                        ***  ಜೈ ಶ್ರೀರಾಮ್ ***
========================================================

Saahitya  : Sri Purandaradaasaru
Singer     : Sri Vidyabhushanaru

kapikaTadhurINaH kArmukanyasta bANaH
kShapitaditijasainyaH kShatriyeShu agragaNyaH |
jaladhirachitasetuH jAnakItoShahetuH
pathi pathi guNasAMdraH pAtu mAM rAmachaMdraH ||

jayatu kodanDa rAma jayatu Dasharatha rAma
jayatu sItArAma jayatu raghurAma                                      || pa ||

tamadaityananu maDuhi mandarAchala negahi
prItiyindale tandu sakala bhUtaLava
kShetradindudbhavisi moryiDuva bAlakana
bhItiyanu biDisi nere kAyda raghurAma                               || 1 ||

baliyoLu dAnava beDi nelana IraDi mADi
Chaladinda kShatriyara kulava hogADi
lalangosuga banda nevadinda rAvaNana
talegaLanu chenDADi mereda raghurAma                            || 2 ||

vasudeva sutanenisi vaniteyara vratageDisi
eseva turagavaneri mallaranu savari
vasudheyoLu purandara viThalanI pAlisai
bisajAkShayodhya puravAsa raghurAma                               || 3 ||

                                  ***  Jai Sri Ram ***