Friday, November 30, 2018

ಬಾರೋ ಕೃಷ್ಣಯ್ಯ / Baaro Krishnayya

ಸಾಹಿತ್ಯ    : ಶ್ರೀ ಕನಕದಾಸರು  
ಗಾಯಕರುಶ್ರೀ ಲಕ್ಷ್ಮಣ್ ಪ್ರಿಯತಮ್


ಧ್ವನಿಸುರಳಿಯ ಕೊಂಡಿ / Hear the song 



ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ ಕೃಷ್ಣಯ್ಯ                                   || ಪ. ||
ಬಾರೋ ನಿನ್ನ ಮುಖ ತೋರೋ ನಿನ್ನ ಸರಿ ಯಾರೋ ಜಗಧರ ಶೀಲನೇ           || ಅ.ಪ ||

ಅಂದುಗೇ ಪಾಡಗವು ಕಾಲಂದುಗೆ ಕಿರು ಗೆಜ್ಜೆ ಧಿಮ್ ಧಿಮಿ
ಧಿಮಿ ಧಿಮಿ ಧಿಮಿರೆನುತ ಪೊಂಗೊಳಲನೂದುತ ಬಾರಯ್ಯ                        || ೧ ||

ಕಂಕಣ ಕರದಲ್ಲಿ ಪೊನ್ನುಂಗುರ ಹೊಳೆಯುತ ಕಿಂಕಿಣಿ ಕಿಣಿ ಕಿಣಿ ಕಿಣಿರೆನುತ
ಪೊಂಗೊಳಲೂದುತ ಬಾರಯ್ಯ ಬಾರೋ ಕೃಷ್ಣಯ್ಯ                                    || ೨ ||

ವಾಸ ಉಡುಪಿಲಿ ನೆಲೆಯಾದಿ ಕೇಶವನೇ ದಾಸ ನಿನ್ನ ಪದ ದಾಸ
ದಾಸ ನಿನ್ನ ಪದ ದಾಸ ನಿನ್ನ ಪದ ದಾಸ ಸಲಹಲು ಬಾರಯ್ಯ                       || ೩ ||

ಸತ್ಯವಂತರ ಸಂಗವಿರಲು ತೀರ್ಥವೇತಕೆ / Satyavantara sangaviralu Teerthavetake

ಸಾಹಿತ್ಯ    : ಶ್ರೀ ಕನಕದಾಸರು
ಗಾಯಕರು: ಶ್ರೀ ರಾಜೀವ ರಮೇಶ್ 


ಧ್ವನಿಸುರಳಿಯ ಕೊಂಡಿ / Hear the song 



ಸತ್ಯವಂತರ ಸಂಗವಿರಲು ತೀರ್ಥವೇತಕೆ
ನಿತ್ಯ ಜ್ಞಾನಿಯಾದ ಮೇಲೆ ಚಿಂತೆ ಯಾತಕೆ             ||ಪ||

ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ
ಮಾನ ಹೀನನಾಗಿ ಬಾಳ್ವ ಮನುಜನೇತಕೆ
ಜ್ಞಾನವಿಲ್ಲದೇ ನೂರು ಕಾಲ ಬದುಕಲೇತಕೆ
ಮಾನಿನಿಯ ತೊರೆದವಗೆ ಭೋಗವೇತಕೆ                ||೧||

ಮಾತು ಕೇಳದೆ ಮಲತು ನಡೆವ ಮಕ್ಕಳೇತಕೆ
ಪ್ರೀತಿ ಇಲ್ಲದೆ ಎಡೆಯನಿಕ್ಕಿದ ಅನ್ನವೇತಕೆ
ನೀತಿಯರಿತು ನಡೆಯದಿರುವ ಬಂಟನೇತಕೆ 
ಸೋತು ಹೆಣ್ಣಿಗೆ ಹೆದರಿ ನಡೆವ ಪುರುಷನೇತಕೆ          ||೨||

ಸಂಜ್ಞೆಯರಿತು ನಡೆಯದಿರುವ ಸತಿ ಇದ್ದೇತಕೆ
ಮುನ್ನ ಕೊಟ್ಟು ಪಡೆಯದನ್ನು ಬಯಸಲೇತಕೆ
ಮನ್ನಣೆಯ ನಡೆಸದಿರುವ ದೊರೆಯು ಏತಕೆ
ಚೆನ್ನ ಆದಿ ಕೇಶವನಲ್ಲದ ದೈವವೇತಕೆ                    ||೩|| 


Tuesday, November 27, 2018

ಕೊಡುವನು ನೀನು ಕೊಂಬುವನು ನಾನು / Koduvanu Neenu Kombuvanu Naanu

ಸಾಹಿತ್ಯ    : ಶ್ರೀ ವಿಜಯದಾಸರು 

ಗಾಯಕರು: ಶ್ರೀ ರಾಯಚೂರು ಶೇಷಗಿರಿ ದಾಸ್





ಕೊಡುವನು ನೀನು ಕೊಂಬುವನು ನಾನು                    ।। ಪ ।।
ಬಡ ಮನದ ಮನುಜನ ಬೇಡಿ ಫಲವೇನು                    ।। ಅ.ಪ ।।  
ಹದಿನಾರು ಹಲ್ಲುಗಳ ಬಾಯ್ತೆರೆದು ಬೇಡಿದರೆ |
ಇದು ಸಮಯಲ್ಲೆಂದು ಹೇಳಿ ತಾನು ।।
ಮದನ ಕೇಳಿಗೆ ನೂರನೊಂದಾಗಿ ನೋಡುವನು |
ಮದಡ ಮಾನವನೇನು ಕೊಡಬಲ್ಲ ಹರಿಯೇ                 ।।೧ ।।    
ಗತಿಯಿಲ್ಲವೆಂತೆಂದು ನಾನಾ ಪ್ರಕಾರದಲಿ |
ಮತಿಗೆಟ್ಟು ಪೊಗಳಿದರೆ ಅವನು ತನ್ನ ।।
ಸತಿಸುತರ ಕೇಳಬೇಕೆಂದು ಮೊಗ ತಿರುಹುವ 
ಅತಿ ದುರುಳ ಮತ್ತೇನು ಕೊಡಬಲ್ಲ ಹರಿಯೇ                ।।  ।।
ಹೀನ ವೃತ್ತಿಯ ಜನರಿಗಾಸೆಯನು ಡುವದು 
ಗಾಣದೆತ್ತು ತಿರುಗಿ ಬಳಲಿದಂತೆ ।।
ಭಾನುಕೋಟಿ ತೇಜ ವಿಜಯ ವಿಠ್ಠಲರೇಯ 
ನೀನಲ್ಲದನ್ಯತ್ರ ಕೊಡು ಕೊಂಬರುಂಟೆ ?                      ।। ೩ ।।

Monday, November 26, 2018

ಇಷ್ಟು ದಿನ ಈ ವೈಕುಂಠ / Ishtu dina ee Vaikunta

ಸಾಹಿತ್ಯ    : ಶ್ರೀ ಕನಕದಾಸರು  
ಗಾಯಕರು: ಶ್ರೀ ವಿದ್ಯಾಭೂಷಣ 


ಇಷ್ಟು ದಿನ ವೈಕುಂಠ, ಎಷ್ಟು ದೂರವು ಎನ್ನುತಲಿದ್ದೆ 
ಇಷ್ಟು ದಿನ ವೈಕುಂಠ, ಎಷ್ಟು ದೂರವು ಎನ್ನುತಲಿದ್ದೆ 
ದೃಷ್ಟಿಯಿಂದಲಿ ನಾನು ಕಂಡೆ 
ದೃಷ್ಟಿಯಿಂದಲಿ ನಾನು ಕಂಡೆ 
ಶೃಷ್ಟಿಗೀಶನೆ ಶ್ರೀರಂಗ ಶಾಯಿ 
ಇಷ್ಟು ದಿನ  ವೈಕುಂಠ, ಎಷ್ಟು ದೂರವು ಎನ್ನುತಲಿದ್ದೆ 
ದೃಷ್ಟಿಯಿಂದಲಿ ನಾನು ಕಂಡೆ 

ಎಂಟು ಏಳನು ಕಳೆದುದರಿಂದೆ ಬಂಟರೈರವ ತುಳಿದುದರಿಂದೆ  
ಎಂಟು ಏಳನು ಕಳೆದುದರಿಂದೆ, ಬಂಟರೈರವ ತುಳಿದುದರಿಂದೆ
ತುಂಟಕನೊಬ್ಬನ ತರಿದುದರಿಂದೆ  
ತುಂಟಕನೊಬ್ಬನ ತರಿದುದರಿಂದೆ  
ಬಂಟನಾಗಿ ಬಂದೆನೋ ರಂಗಶಾಯಿ
ಇಷ್ಟು ದಿನ  ವೈಕುಂಠ, ಎಷ್ಟು ದೂರವು ಎನ್ನುತಲಿದ್ದೆ 
ದೃಷ್ಟಿಯಿಂದಲಿ ನಾನು ಕಂಡೆ 

ವಜ್ರವೈಡೂರ್ಯದ ತೊಲೆಗಳ ಕಂಡೆ, ಪ್ರಜ್ವಲಿಪ ಮಹಾದ್ವಾರವ ಕಂಡೆ 
ವಜ್ರವೈಡೂರ್ಯದ ತೊಲೆಗಳ ಕಂಡೆ, ಪ್ರಜ್ವಲಿಪ ಮಹಾದ್ವಾರವ ಕಂಡೆ 
ನಿರ್ಜರಾದಿ ಮುನಿಗಳನಾ ಕಂಡೆ 
ನಿರ್ಜರಾದಿ ಮುನಿಗಳನಾ ಕಂಡೆ 
ದುರ್ಜನಾಂತಕನೆ ಶ್ರೀರಂಗಶಾಯಿ 
ಇಷ್ಟು ದಿನ  ವೈಕುಂಠ, ಎಷ್ಟು ದೂರವು ಎನ್ನುತಲಿದ್ದೆ
ದೃಷ್ಟಿಯಿಂದಲಿ ನಾನು ಕಂಡೆ 

ರಂಭೆ ಊರ್ವಷಿ ಮೇಳವ ಕಂಡೆ, ತುಂಬುರು ಮುನಿನಾರದರನು ಕಂಡೆ 
ರಂಭೆ ಊರ್ವಷಿ ಮೇಳವ ಕಂಡೆ, ತುಂಬುರು ಮುನಿನಾರದರನು ಕಂಡೆ 
ಅಂಬುಜೋದ್ಭವ ರುದ್ರರ ಕಂಡೆ  
ಅಂಬುಜೋದ್ಭವ ರುದ್ರರ ಕಂಡೆ  
ಶಂಬರಾರಿಪಿತನೆ ರಂಗಶಾಯಿ 
ಇಷ್ಟು ದಿನ  ವೈಕುಂಠ, ಎಷ್ಟು ದೂರವು ಎನ್ನುತಲಿದ್ದೆ
ದೃಷ್ಟಿಯಿಂದಲಿ ನಾನು ಕಂಡೆ 

ನಾಗಶಯನನ ಮೂರುತಿ ಕಂಡೆ, ಭೋಗಿಭೂಷಣ ಶಿವನನು ಕಂಡೆ 
ನಾಗಶಯನನ ಮೂರುತಿ ಕಂಡೆ, ಭೋಗಿಭೂಷಣ ಶಿವನನು ಕಂಡೆ 
ಭಾಘವತರ ಸಮ್ಮೇಳವ ಕಂಡೆ
ಭಾಘವತರ ಸಮ್ಮೇಳವ ಕಂಡೆ
ಕಾಗಿನೆಲೆಯಾದಿಕೇಶವನ ನಾ ಕಂಡೆ 
ಇಷ್ಟು ದಿನ ವೈಕುಂಠ, ಎಷ್ಟು ದೂರವು ಎನ್ನುತಲಿದ್ದೆ 
ದೃಷ್ಟಿಯಿಂದಲಿ ನಾನು ಕಂಡೆ 
ಶೃಷ್ಟಿಗೀಶನೆ ಶ್ರೀರಂಗ ಶಾಯಿ 
ಇಷ್ಟು ದಿನ  ವೈಕುಂಠ, ಎಷ್ಟು ದೂರವು ಎನ್ನುತಲಿದ್ದೆ
ದೃಷ್ಟಿಯಿಂದಲಿ ನಾನು ಕಂಡೆ......  


ನಿರ್ಜರ : ಮುಪ್ಪಿಲ್ಲದವರು 
ಅಂಬುಜ : ಕಮಲ


Thursday, November 22, 2018

ನಡಿ ನಡಿ ಸುಪಥವ / Nadi Nadi Supathava


ಸಾಹಿತ್ಯ    : ಶ್ರೀ ವಿಜಯದಾಸರು 
ಗಾಯಕರು: ಶ್ರೀ ರಾಯಚೂರು ಶೇಷಗಿರಿ ದಾಸ್


ಧ್ವನಿಸುರಳಿಯ ಕೊಂಡಿ / Hear the song 



ನಡಿ ನಡಿ ಸುಪಥವ
ಜಗದೊಡೆಯನನೆನೆ  ಮನವೇ                                                || ಪ ||

ಬಿಡು ಬಿಡು ಮಾಯಾವನು ಕೆಡದಿರು ಕಪಟದಲಿ                        || ಅ.ಪ ||

ನಾನು ನನ್ನದು ಎಂಬೋ, ಹೀನ ವಚನ ಸಲ್ಲ
ಗೇಣೂದರ ಪೊರೆವುದಲ್ಲದೆ
ಮತ್ತೇನಾದರೂ ಉಂಟೆ                                                         || ೧ ||

ಮಡದಿ ಮಕ್ಕಳ ನೋಡಿ, ಕಡುಹಿಗ್ಗಿ ಕೆಡಬೇಡ
ಕಡುಮುನಿದೆಮನಾಳುಗಳು
ಪಿಡಿದೇಳೆದೊಯ್ಯುವಾಗ                                                        || ೨ ||

ಇರಳು ಹಗಲು ನೀನು ಹರಿಸ್ಮರಣೆ ಚಿತ್ತದಲಿ
ಸ್ಥಿರವಾಗಿ ಇರಿಸೋದು
ಅನಂತ ಜನ್ಮ ಪಾಪ ಪೋಗುವುದು                                           || ೩ ||

ಜ್ಞಾನಮಾರ್ಗವಿಡಿದು ಆನಂದ ಮೂರುತಿಯ
ಧ್ಯಾನದಿಂದಲಿ ಕಾಣೋ ದೈನ್ಯ ವೃತ್ತಿಯ ಬಿಟ್ಟು
ಹಾನಿ ವೃದ್ಧಿಯ ಜರಿದು                                                           || ೪ ||

ಅತಿ ಕಾಮಾತುರನಾಗಿ, ರತಿಯಲ್ಲಿ ಸಿಗದಿರು
ಸತತ ಮಾಡಿದ ಕರ್ಮ ವ್ಯಾಳೆ ವ್ಯಾಳೆಗೆ ಶ್ರೀಪತಿಗರ್ಪಿತವೆಂದು            || ೫ ||

ಸಂತೋಷಗಳು ಬರಲಿ, ಸಂತಾಪಗಳು ಇರಲಿ
ಇಂತು ಇವರಿಗೆಲ್ಲ ಪ್ರೇರಕ ಹರಿಜಗದಂತರ್ಯಾಮಿಯೆಂದು             || ೬ ||

ಧನಕನಕ ವಸ್ತು ಮಾಲಿನಿ ನಂದನರು ಆರು 
ತನುವೇ ನಿನ್ನದಲ್ಲ ತಿಳಿದುಕೊ, ಗತಿ ಸಾಧನಕೆ ವಿಜಯವಿಠ್ಠಲನೆಂದು   || ೭ ||

ಪವಮಾನ ಪವಮಾನ / Pavamaana Pavamaana

ಸಾಹಿತ್ಯ    : ಶ್ರೀ ವಿಜಯ ದಾಸರು 
ಗಾಯಕರು: ಶ್ರೀ ಪುತ್ತೂರು ನರಸಿಂಹ ನಾಯಕ್



ಪವಮಾನ.....  ಪವಮಾನ ....
ಪವಮಾನ ಪವಮಾನ ಪವಮಾನ ಜಗದಪ್ರಾಣ
ಪವಮಾನ ಜಗದಪ್ರಾಣ
ಸಂಕರುಷಣ ಭವಭಯಾರಣ್ಯ ದಹನ ದಹನ...

ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಜನಪ್ರಿಯ
ಪವಮಾನ ಪವಮಾನ ಜಗದಪ್ರಾಣ
ಸಂಕರುಷಣ ಭವಭಯಾರಣ್ಯ ದಹನ ದಹನ...

ಹೇಮ ಕಚ್ಚುಟ, ಉಪವೀತ ಧರಿಪ ಮಾರುತ,
ಕಾಮಾದಿ ವರ್ಗರಹಿತ, ಕಾಮಾದಿ ವರ್ಗರಹಿತ
ವ್ಯೊಮಾದಿ ಸರ್ವವ್ಯಾಪುತ, ಸತತ ನಿರ್ಭೀತ,
ರಾಮಚಂದ್ರನ ನಿಜದೂತ ರಾಮಚಂದ್ರನ ನಿಜದೂತ

ಯಾಮಯಾಮಕೆ ನಿನ್ನಾರಧಿಪುದಕೆ,
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ,
ಪಾಮರ ಮತಿಯನು ನೀ ಮಾಣಿಪುದು
ಪವಮಾನ ಪವಮಾನ ಜಗದಪ್ರಾಣ
ಸಂಕರುಷಣ ಭವಭಯಾರಣ್ಯ ದಹನ ದಹನ...

ವಜ್ರ ಶರೀರ ಗಂಭೀರ,
ಮುಕುಟಧರ ದುರ್ಜನವನ ಕುಠಾರ, ದುರ್ಜನವನ ಕುಠಾರ
ನಿರ್ಜರಮಣಿ ದಯಪಾರ, ವಾರ ಉದಾರ,
ಸಜ್ಜನರಘ ಪರಿಹಾರ, ಸಜ್ಜನರಘ ಪರಿಹಾರ

ಅರ್ಜುನಗೋಲಿದಂದು ಧ್ವಜವಾನಿಸಿ, ನಿಂದು ಮೂರ್ಜಗವರಿವಂತೆ ಘರ್ಜನೆ ಮಾಡಿದೆ
ಹೆಜ್ಜೆಹೆಜ್ಜೆಗೆ ನಿನಬ್ಜಪಾದದ ಧೂಳಿ ಮಜ್ಜನದಲಿ ಭವವರ್ಜಿತವೆನಿಸೋ
ಪವಮಾನ ಪವಮಾನ ಜಗದಪ್ರಾಣ
ಸಂಕರುಷಣ ಭವಭಯಾರಣ್ಯ ದಹನ ದಹನ...

ಪ್ರಾಣ ಪಾನ ವ್ಯಾನ ಉದಾನ ಸಮಾನ
ಆನಂದಭಾರತಿರಮಣ, ಆನಂದಭಾರತಿರಮಣ
ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ,
ಜ್ಞಾನಧನ ಪಾಲಿಪವರೇಣ್ಯ,  ಜ್ಞಾನಧನ ಪಾಲಿಪವರೇಣ್ಯ

ನಾನು ನಿರುತದಲಿ ಏನೇನೆಸಗುವೆ, ಮಾನಸಾದಿ ಕರ್ಮ ನಿನಗೊಪ್ಪಿಸಿದೆನು
ಪ್ರಾಣನಾಥ ಸಿರಿ ವಿಜಯ ವಿಠ್ಠಲನ
ವಿಠ್ಠಲ... , ವಿಠ್ಠಲ.... ವಿಠ್ಠಲ...
ಪ್ರಾಣನಾಥ ಸಿರಿ ವಿಜಯ ವಿಠ್ಠಲನ, ಕಾಣಿಸಿ ಕೊಡುವುದು ವಿಜಯಪ್ರಕಾಶ
ಪವಮಾನ ಪವಮಾನ ಜಗದಪ್ರಾಣ
ಸಂಕರುಷಣ ಭವಭಯಾರಣ್ಯ ದಹನ ದಹನ...

ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಜನಪ್ರಿಯ
ಪವಮಾನ ಪವಮಾನ ಜಗದಪ್ರಾಣ
ಸಂಕರುಷಣ ಭವಭಯಾರಣ್ಯ ದಹನ ಪವಮಾನ ...ಪವಮಾನ..  ಪವಮಾನ


ಕ್ಲಿಷ್ಟ ಪದಗಳ ಅರ್ಥ :

ಕಚ್ಚುಟ     : ಲಂಗೋಟಿ
ವ್ಯೋಮ    : ಆಕಾಶ, ವಾಯುಮಂಡಲ
ಮಾರುತ   : ಗಾಳಿ
ಯಾಮ    : ಕಾವಲು, ಪಹರೆ, ಕಾವಲುಗಾರರ ಠಾಣೆ
ಪಾಮರ    : ತಿಳಿವಳಿಕೆಯಿಲ್ಲದವನು, ದಡ್ಡ, ಮೂಢ ಅಲ್ಪನಾದವನು, ನೀಚ ,ತುಚ್ಛ
ಮಾಣಿಪು  : ಕುಗ್ಗಿಸು, ತಗ್ಗಿಸು ಸುಮ್ಮನಿರಿಸು, ನಿಷ್ಕ್ರಿಯಗೊಳಿಸು
ಕುಠಾರ     : ಕೊಡಲಿ
ನಿರ್ಜರ     : ಮುಪ್ಪಿಲ್ಲದವನು, ದೇವತೆ
ಅಬ್ಜ         : ತಾವರೆ
ವ್ಯಾನ        : ಪಂಚಪ್ರಾಣಗಳಲ್ಲಿ ಒಂದು
ನಿರುತದಲಿ : ಆತ್ಮಭಾವದಲಿ

Monday, November 19, 2018

ತಲ್ಲಣಿಸದಿರು ಕಂಡ್ಯ ತಾಳು ಮನವೆ / Tallanisadiru kandya taalu manave

ಸಾಹಿತ್ಯ    : ಶ್ರೀ ಕನಕದಾಸರು  
ಗಾಯಕರು: ಶ್ರೀ ವಿದ್ಯಾಭೂಷಣರು 





ತಲ್ಲಣಿಸದಿರು ಕಂಡ್ಯ ತಾಳು ಮನವೆ                   || ಪ ||
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ        || ಅ.ಪ ||

ಬೆಟ್ಟದಾ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ
ಕಟ್ಟೆಯನ್ನು ಕಟ್ಟಿ ನೀರೆರೆದವರು ಯಾರೊ
ಪುಟ್ಟಿಸಿದ ದೇವ ತಾ ಹೊಣೆಗಾರನಾಗಿರಲು
ಗಟ್ಯಾಗಿ ರಕ್ಷಿಪನು ಇದಕೆ ಸಂಶಯವಿಲ್ಲ                || ೧ ||

ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರ ಇತ್ತವರು ಯಾರೋ
ಹಡೆದ ಜನನಿಯ ತೆರದೆ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ                    || ೨ ||

ಕಲ್ಲಿನಲಿ ಹುಟ್ಟಿ ತಾ ಕೂಗುವ ಕಪ್ಪೆಗೆ
ಅಲ್ಲಿ ಆಹಾರವನು ತಂದೀಯುವರ್ಯಾರೋ
ಬಲ್ಲಿದನು ಕಾಗಿನೆಲೆಯಾದಿಕೇಶವರಾಯ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ         || ೩ ||