ಸಾಹಿತ್ಯ : ಶ್ರೀ ಪುರಂದರದಾಸರು
ಗಾಯಕರು : ಶ್ರೀ ವಿದ್ಯಾಭೂಷಣರು
ಧ್ವನಿಸುರಳಿಯ ಕೊಂಡಿ / Hear the song
ಕಪಿಕಟಧುರೀಣಃ ಕಾರ್ಮುಕನ್ಯಸ್ತ ಬಾಣಃ
ಕ್ಷಪಿತದಿತಿಜಸೈನ್ಯಃ ಕ್ಷತಿಯೇಷು ಅಗ್ರಗಣ್ಯಃ ।
ಜಲಧಿರಚಿತಸೇತುಃ ಜಾನಕೀತೋಷಹೇತುಃ
ಪಥಿ ಪಥಿ ಗುಣಸಾಂದ್ರಃ ಪಾತು ಮಾಂ ರಾಮಚಂದ್ರಃ ||
ಜಯತು ಕೋದಂಡರಾಮ ಜಯತು ದಶರಥರಾಮ
ಜಯತು ಸೀತಾರಾಮ ಜಯತು ರಘುರಾಮ. || ಪ ||
ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ
ಪ್ರೀತಿಯಿಂದಲೇ ತಂದು ಸಕಲ ಭೂತಳವ
ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ
ಭೀತಿಯನು ಬಿಡಿಸಿ ನೆರೆ ಕಾಯ್ದ ರಘುರಾಮ. || ೧ ||
ಬಲಿಯೊಳು ದಾನವ ಬೇಡಿ ನೆಲನ ಈರಡಿ ಮಾಡಿ
ಛಲದಿಂದ ಕ್ಷತ್ರಿಯರ ಕುಲವ ಹೋಗಾಡಿ
ಲಲನೆಗೋಸುಗ ಬಂದ ನೆವದಿಂದ ರಾವಣನ
ತಲೆಗಳನು ಚೆಂಡಾಡಿ ಮೆರೆದ ರಘುರಾಮ || ೨ ||
ವಸುದೇವ ಸುತನೆನಿಸಿ ವನಿತೆಯರ ವ್ರತಗೆಡಿಸಿ
ಎಸೆವ ತುರಗವನೇರಿ ಮಲ್ಲರನು ಸವರಿ
ವಸುಧೆಯೊಳು ಪುರಂದರ ವಿಠಲನೀ ಪಾಲಿಸೈ
ಬಿಸಜಾಕ್ಷಯೋಧ್ಯ ಪುರವಾಸ ರಘುರಾಮ || ೩ ||
ಭಾವಾರ್ಥ:
* ಇದು ರಾಮದೇವರ / ವಿಷ್ಣುವಿನ ದಶಾವತಾರ ಸ್ತುತಿ *
ಜಯತು ಕೋದಂಡರಾಮ ಜಯತು ದಶರಥರಾಮ
ಜಯತು ಸೀತಾರಾಮ ಜಯತು ರಘುರಾಮ.
ಜಯತು : ಜಯವಾಗಲಿ
ಕೋದಂಡ : ಬಿಲ್ಲು, ಧನಸ್ಸು
ಕೋದಂಡರಾಮ : ಬಿಲ್ಲನು ಹಿಡಿದಿರುವ ರಾಮ
ದಶರಥರಾಮ : ದಶರಥ ರಾಜರ ಮಗ ರಾಮ
ಸೀತಾರಾಮ : ಸೀತಾ ಪತಿ ರಾಮ
: ಇಕ್ಷ್ವಾಕು ವಂಶಿ (ಸೂರ್ಯವಂಶಿ) ರಘು -> ಅಜ -> ದಶರಥ -> ಶ್ರೀರಾಮ
ತಮದೈತ್ಯನನು ಮಡುಹಿ: ಮತ್ಸ್ಯಾವತಾರ
ಬ್ರಹ್ಮನಿಂದ ವೇದಗಳನ್ನು ಅಪಹರಿಸಿದ ಹಯಗ್ರೀವಾಸುರ ನಾಮಕ ದೈತ್ಯನ ಸಂಹರಿಸಿದವನು
ಮತ್ಸ್ಯ : ಮೀನು
ಮಂದರಾಚಲ ನೆಗಹಿ : ಕೂರ್ಮಾವತಾರ
ಸಮುದ್ರ ಮಂಥನದ ಸಮಯದಲ್ಲಿ ಕೂರ್ಮಾವತಾರದಿ ಮಂದರಗಿರಿಯನೆತ್ತಿದವನು
ಮಂದರ : ದಟ್ಟವಾದ, ಸಾಂದ್ರವಾದ
ಅಚಲ : ಕದಲದ,ಅಲುಗದ, ಬೆಟ್ಟ, ಗಿರಿ
ಕೂರ್ಮಾ : ಆಮೆ
ಪ್ರೀತಿಯಿಂದಲೇ ತಂದು ಸಕಲ ಭೂತಳವ: ವರಾಹಾವತಾರ
ವರಾಹಾವತಾರದಿ ಹಿರಣ್ಯಾಕ್ಷನನ್ನು ಸಂಹರಿಸಿ ಭೂಮಿಯನ್ನು ಉದ್ಧರಿಸಿದವನು
ವರಾಹ : ಹಂದಿ
ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ
ಭೀತಿಯನು ಬಿಡಿಸಿ ನೆರೆ ಕಾಯ್ದ ರಘುರಾಮ. : ನರಸಿಂಹಾವತಾರ
ಕಂಬದಿಂದ ಹೊರಗೆ ಬಂದು ಪ್ರಹ್ಲಾದನ ಭೀತಿ ಬಿಡಿಸಿದ ನರಸಿಂಹನು
ಬಲಿಯೊಳು ದಾನವ ಬೇಡಿ ನೆಲನ ಈರಡಿ ಮಾಡಿ: ವಾಮನಾವತಾರ
ಈರಡಿ : ಇಡೀ ಭೂಮಿಯನ್ನು ತನ್ನ ಎರಡು ಹೆಜ್ಜೆಗಳಿಂದ ಅಳೆದು
ವಾಮನನು ಬಲಿ ಚಕ್ರವರ್ತಿಯ ಹತ್ತಿರ ಮೂರು ಹೆಜ್ಜೆಯಷ್ಟು ದಾನವ ಬೇಡಿ, ಮೂರು ಹೆಜ್ಜೆಗಳನು ಇಡುತ್ತಾನೆ
೧. ಭೂಮಿಯಿಂದ ಕೆಳಗಿನ ೭ ಲೋಕಗಳು
೨. ಭೂಮಿಯಿಂದ ಮೇಲಿನ ೭ ಲೋಕಗಳು
೩. ಬಲಿಯ ತಲೆ
ಬಲಿಯಲ್ಲಿ ಜೀವದ್ವಯ ಆವೇಶ ಇರುತ್ತದೆ
ಬಲಿ ಎಂಬ ರಾಕ್ಷಸ ಹಾಗು ಬಲಿ ಎಂಬ ದೇವತೆ..
ರಾಕ್ಷಸನನ್ನು ತಮಸಿಗೆ ಅಟ್ಟಿ,
ಬಲಿಯನುದ್ಧರಿಸಿದ ವಾಮನನಾವತಾರಿ ಶ್ರೀಹರಿ
ಛಲದಿಂದ ಕ್ಷತ್ರಿಯರ ಕುಲವ ಹೋಗಾಡಿ : ಪರಶುರಾಮಾವತಾರ
ತನ್ನ ತಂದೆ ಜಮದಗ್ನಿಯನ್ನು ಕೊಂದ ದುರಾಚಾರಿ ಕ್ಷತ್ರಿಯರನ್ನು (ರಾಜ ಕಾರ್ತವೀರ್ಯ) ಇಲ್ಲವಾಗಿಸಿದ ಪರಶುರಾಮ
ಲಲನೆಗೋಸುಗ ಬಂದ ನೆವದಿಂದ ರಾವಣನ
ತಲೆಗಳನು ಚೆಂಡಾಡಿ ಮೆರೆದ ರಘುರಾಮ : ಶ್ರೀರಾಮಾವತಾರ
ಸೀತಾಮಾತೆಯನು ಅಪಹರಿಸಿದ ದಶಮುಖ ರಾವಣನ
ಚೆಂಡಾಡಿ ಅಸುನೀಗಿಸಿದ ಕೋದಂಡರಾಮ : ಶ್ರೀರಾಮ
ಲಲನೆಗೋಸುಗ = ಲಲನೆಗೆ + ಓಸುಗ
ಲಲನೆಗೆ : ಹೆಣ್ಣಿಗೆ: ಸೀತೆಗೆ
ಓಸುಗ : ಓಸ್ಕರ, ಸಲುವಾಗಿ
ಲಲನೆಗೋಸುಗ : ಸೀತೆಗೋಸ್ಕರ
ವಸುದೇವ ಸುತನೆನಿಸಿ : ಶ್ರೀಕೃಷ್ಣಾವತಾರ
ವಸುದೇವ ಸುತ : ವಸುದೇವನ ಮಗ ದುಷ್ಟ ಶಿಕ್ಷಣಾರ್ಥ, ಶಿಷ್ಟ ರಕ್ಷಣಾರ್ಥ
ಅಧರ್ಮ ನಾಶಾರ್ಥ, ಧರ್ಮಸಂಸ್ಥಾಪನಾರ್ಥ
ಅವತರಿಸಿದ ಪಾರ್ಥಸಾರಥಿ : ಶ್ರೀಕೃಷ್ಣ
ವನಿತೆಯರ ವ್ರತಗೆಡಿಸಿ : ಬೌದ್ಧಾವತಾರ
ವನಿತೆ : ಸ್ತ್ರೀ
ತ್ರಿಪುರಾಸುರರ ಮಹಾ ಪತಿವ್ರತೆ ಪತ್ನಿಯರನ್ನು ಮೋಹಿಸಿ,
ಅವರ ಪತಿಯಂದಿರ ರಕ್ಷಣೆಯ ಸಲುವಾಗಿ ನೆಡೆಸುತ್ತಿದ್ದ ವ್ರತವ ಕೆಡಿಸಿ
ರುದ್ರದೇವರಿಗೆ ತ್ರಿಪುರಾಸುರರ ವಧಿಸಲು ಸಹಾಯ ಮಾಡಿದವ
ಅವರ ಪತಿಯಂದಿರ ರಕ್ಷಣೆಯ ಸಲುವಾಗಿ ನೆಡೆಸುತ್ತಿದ್ದ ವ್ರತವ ಕೆಡಿಸಿ
ರುದ್ರದೇವರಿಗೆ ತ್ರಿಪುರಾಸುರರ ವಧಿಸಲು ಸಹಾಯ ಮಾಡಿದವ
ಎಸೆವ ತುರಗವನೇರಿ ಮಲ್ಲರನು ಸವರಿ: ಕಲ್ಕಿ ಅವತಾರ
ತುರಗ : ಕುದುರೆ
ಮಲ್ಲರು : ದುರಾಚಾರಿಗಳು
ಸವರು : ಕತ್ತರಿಸು (ಈ ದೇವರನಾಮಕ್ಕೆ)
ವಸುಧೆಯೊಳು ಪುರಂದರ ವಿಠಲನೀ ಪಾಲಿಸೈ
ವಸುಧೆ : ಭೂಮಿ
ಈ ಭೂಮಿಯಲ್ಲಿ ನೀನೇ ನಮ್ಮನ್ನು ಪಾಲಿಸಬೇಕು ಕಾಪಾಡಬೇಕು ಪುರಂದರವಿಠಲ
ಬಿಸಜಾಕ್ಷಯೋಧ್ಯ ಪುರವಾಸ ರಘುರಾಮ
ಬಿಸಜ : ಕಮಲ
ಬಿಸಜಾಕ್ಷ : ಕಮಲದ ಕಣ್ಣುಳ್ಳವನು : ಶ್ರೀರಾಮ
ಅಯೋಧ್ಯ ಪುರವಾಸ ನಾದ ಬಿಸಜಾಕ್ಷ ರಘುರಾಮ..
ಈ ದೇವರನಾಮ ಶ್ರೀಪುರಂದರದಾಸರು ಅಯೋಧ್ಯಾ ಕ್ಷೇತ್ರ ಸಂದರ್ಶಿಸಿದಾಗ
ಅಂತರಂಗದಲ್ಲಿ ಕಂಡ ಶ್ರೀರಾಮದೇವರ ರೂಪಗಳನ್ನು ವರ್ಣಿಸಿದ ಪರಿ.
**ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**
*** ಜೈ ಶ್ರೀರಾಮ್ ***
Saahitya : Sri Purandaradaasaru
Singer : Sri Vidyabhushanaru
kapikaTadhurINaH kArmukanyasta bANaH
kShapitaditijasainyaH kShatriyeShu agragaNyaH |
jaladhirachitasetuH jAnakItoShahetuH
pathi pathi guNasAMdraH pAtu mAM rAmachaMdraH ||
jayatu kodanDa rAma jayatu Dasharatha rAma
jayatu sItArAma jayatu raghurAma || pa ||
tamadaityananu maDuhi mandarAchala negahi
prItiyindale tandu sakala bhUtaLava
kShetradindudbhavisi moryiDuva bAlakana
bhItiyanu biDisi nere kAyda raghurAma || 1 ||
baliyoLu dAnava beDi nelana IraDi mADi
Chaladinda kShatriyara kulava hogADi
lalangosuga banda nevadinda rAvaNana
talegaLanu chenDADi mereda raghurAma || 2 ||
vasudeva sutanenisi vaniteyara vratageDisi
eseva turagavaneri mallaranu savari
vasudheyoLu purandara viThalanI pAlisai
bisajAkShayodhya puravAsa raghurAma || 3 ||
*** Jai Sri Ram ***
ಸೊಗಸಾಗಿದೆ ಗಿರಿ...ಅರ್ಥಗರ್ಭಿತವಾಗಿದೆ...ಅಭಿನಂದನೆಗಳು ನಿಮ್ಮ ಪರಿಶ್ರಮಕ್ಕೆ ಗಿರಿ
ReplyDeleteಹೃದಯಪೂರ್ವಕ ಧನ್ಯವಾದಗಳು ಶ್ರೀ ... ನಿಮ್ಮ ನಿರಂತರ ಪ್ರೋತ್ಸಾಹ ... ನನಗೆ ಕೊಡುವುದು ಉತ್ಸಾಹ
Delete