Tuesday, August 18, 2020

ರಾಮ ಭಜನೆ ಮಾಡೋ ಮನುಜ / Rama Bhajane Maado Manuja

ಸಾಹಿತ್ಯ      : ಶ್ರೀ ವಿದ್ಯಾಪ್ರಸನ್ನ ತೀರ್ಥರು 

ಗಾಯಕರು  : ಶ್ರೀಮತಿ ದಿವ್ಯ ಗಿರಿಧರ್ 



ಧ್ವನಿಸುರಳಿಯ ಕೊಂಡಿ / Hear the song
 

ರಾಮ ಭಜನೆ ಮಾಡೋ ಮನುಜ                            || ಪ || 

ರಾಮ ರಾಮ ಜಯ ರಾಘವ ಸೀತಾ 

ರಾಮನೆಂದು ಸುಸ್ವರದಲಿ ಪಾಡುತ                        || ಅ.ಪ ||

 

ತಾಳವನು ಬಿಡಬೇಡ ಮೇಳವನು ಮರಿಬೇಡ

ತಾಳ ಮೇಳಗಳ ಬಿಟ್ಟು ನುಡಿದರೆ 

ತಾಳನು ನಮ್ಮಿಳಾಸುತೆಯರಸನು                          || ೧ ||

 

ಚಿತ್ತವನು ಚಲಿಸದಿರು ಭೃತ್ಯ ಮನೋಭಾವದಲಿ 

ಸತ್ಯ ಜ್ಞಾನ ಅನಂತ ಬ್ರಹ್ಮನು 

ಹೃದ್ಗತನೆಂದರಿಯುತ  ಭಕುತಿಯಲಿ                       || ೨ ||

 

ಭಲರೆ ಭಲರೆಯೆಂದು ತಲೆದೂಗುವ ತೆರದಿ 

ಕಲಿಯುಗದಿ ವರ ಕೀರ್ತನೆಯಿಂದಲಿ

ಸುಲಭದಿ ಹರಿಯ ಪ್ರಸನ್ನತೆ ಪಡೆಯಲು                   || ೩ ||


ಭಾವಾರ್ಥ :   

ರಾಮನೆಂದು ಸುಸ್ವರದಲಿ ಪಾಡುತ : 

ಶ್ರೀರಾಮನಾಮವನು ಅಂತಃ ಶುದ್ಧಿಯೊಳಗೊಂಡ ಸ್ವರದಲಿ ಹಾಡುತ

 

ತಾಳವನು ಬಿಡಬೇಡ 

ಶ್ರೀರಾಮನು ನಮ್ಮೊಳು ಕೂತು ಹಾಕುವ ತಾಳ

ಅಂದರೆ ಸನ್ಮಾರ್ಗದ ಸೂಚನೆಗಳೆಂಬ ತಾಳಕೆ ಹೆಜ್ಜೆಯ ಹಾಕುವುದನು ತ್ಯಜಿಸದಿರು

 

ಮೇಳವನು ಮರಿಬೇಡ

ಶ್ರೀರಾಮನು ತೋರಿದ ಸಜ್ಜನರ ಸಂಗವ ಮರೆಯದಿರು

 

ತಾಳ ಮೇಳಗಳ ಬಿಟ್ಟು ನುಡಿದರೆ 

ತಾಳನು ನಮ್ಮಿಳಾಸುತೆಯರಸನು

ಶ್ರೀರಾಮನು ತೋರಿದ ಸನ್ಮಾರ್ಗ, ಸಜ್ಜನರ ಸಂಗಗಳನು ತೊರೆದು ನುಡಿದು ನಡೆದರೆ 

ನಿನ್ನೊಳಗಿನ ಶ್ರೀರಾಮನೇ ಯಮನಾಗುವನು 

 

ನಮ್ಮಿಳಾಸುತೆಯರಸನು = ನಮ್ಮ+ಇಳಾಸುತೆ+ಅರಸನು

                  ಇಳಾಸುತೆ = ಇಳೆಯ + ಸುತೆ

                         ಇಳೆ  : ಭೂದೇವಿ, ಭೂಮಿ ತಾಯಿ 

                         ಸುತೆ : ಮಗಳು

                  ಇಳಾಸುತೆ : ಸೀತಾಮಾತೆ 

 

ಚಿತ್ತವನು ಚಲಿಸದಿರು ಭೃತ್ಯ ಮನೋಭಾವದಲಿ

" ಮನವೆಂಬುದು ಮರ್ಕಟದಂತೆ

ನಿನ್ನ ಚಿತ್ತ, ಅಂದರೆ ನಿನ್ನ ಮನವು ಮರ್ಕಟನ ಭಂಟನಾದರೆ

ಎಲ್ಲಿಯ ಏಕಾಗ್ರತೆ, ಎಲ್ಲಿಯ ಸಾಧನೆ, ಎಲ್ಲಿಯ ಸಾರ್ಥಕತೆ.

ಮನದಿ ಸರ್ವೋತ್ತಮನಾದ ಶ್ರೀರಾಮನ ರೂಪವ ನೆಲೆಯಾಗಿಸಿ, 

ಜೀವೋತ್ತಮನಾದ ವಾಯುದೇವನನು ಶ್ವಾಸ-ನಿಶ್ವಾಸದಿ ಗಮನಿಸಿ ಧ್ಯಾನಗೈದು ಏಕಾಗ್ರಚಿತ್ತನಾಗು 

     ಭೃತ್ಯ : ಭಂಟ 

 ಮರ್ಕಟ : ಕೋತಿ, ಮಂಗ : ಸಂದರ್ಭಕ್ಕೆ "ಚಂಚಲತೆ" ಎಂದರ್ಥ  

 

ಸತ್ಯ ಜ್ಞಾನ ಅನಂತ ಬ್ರಹ್ಮನು 

ಹೃದ್ಗತನೆಂದರಿಯುತ  ಭಕುತಿಯಲಿ   

  ಹೃದ್ಗತ = ಹೃತ್ + ಗತ 

   ಹೃತ್ : ಹೃದಯ

     ಗತ : ಒಳಗಿರುವ

 ಹೃದ್ಗತ : ಹೃದಯದಲ್ಲಿ ನೆಲಸಿಹ

 ಪರಮಸತ್ಯ ಜ್ಞಾನಸಾಗರ ಅನಂತಾನಂತ

ಸಕಲಲೋಕಾಧೀಶ ಶ್ರೀರಾಮನು 

ನಮ್ಮೊಳಗಿನ ಹೃದಯವೆಂಬ ಗರ್ಭಗುಡಿಯಲಿ ನೆಲಸಿಹನು 

ಎಂದರಿಯುತ, ಭಕ್ತಿಯಿಂದ ಅವನ ನಾಮಸ್ಮರಣೆ ಮಾಡು

 

ಭಲರೆ ಭಲರೆಯೆಂದು ತಲೆದೂಗುವ ತೆರದಿ 

ಕಲಿಯುಗದಿ ವರ ಕೀರ್ತನೆಯಿಂದಲಿ

ಸುಲಭದಿ ಹರಿಯ ಪ್ರಸನ್ನತೆ ಪಡೆಯಲು 

ಶ್ರೀರಾಮರ ಮಹಿಮೆಯನರಿತು, ಭಲೇ, ಧನ್ಯ, ಧನ್ಯೋಸ್ಮಿ 

ಎಂದು ಮೈಮರೆತು ತಲೆದೂಗುತ, ಕಲಿಯುಗದಲಿ 

ಹರಿದಾಸರ ಕೀರ್ತನೆಗಳನು ಅಂತಃಶುದ್ಧಿಯೊಳು ಪಾಡಿ

ಪೊಗಳಿ ಶ್ರೀರಾಮರ ಕೃಪೆಯನು ಸುಲಭವಾಗಿ ಪಡೆದು

ಕೃತಾರ್ಥರಾಗಿ ಎಂದು ಶ್ರೀ ವಿದ್ಯಾಪ್ರಸನ್ನ ತೀರ್ಥರು ಸಂಬೋಧಿಸಿದ್ದಾರೆ

 

      **ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**
                                    
                                          ***  ಜೈ ಶ್ರೀರಾಮ್ ***
==========================================================

Saahitya  : Sri Vidya Prasanna Theertharu
Singer     : Smt Divya Giridhar


rAma bhajane mADo manuja                                    || pa ||

rAma rAma jaya rAghava sItA

rAmanendu susvaradali pADuta                                       || a.pa ||

 

tALavanu biDabeDa meLavanu maribeDa

tALa meLagaLa biTTu nuDidare

tALanu nammiLAsuteyarasanu                                         || 1 ||

 

chittavanu chalisadiru bhRRutya manobhAvadali

satya gnAna ananta brahmanu

hRRudgatanendariyuta bhakutiyali                                 || 2 ||

 

bhalare bhalareyendu taledUguva teradi

kaliyugadi vara kIrtaneyindali

sulabhadi hariya prasannate paDeyalu                           || 3 ||

                                
                                    ***  Jai Sri Ram ***

2 comments:

  1. ಶ್ರೀರಾಮನು ತೋರಿದ ಸನ್ಮಾರ್ಗ, ಸಜ್ಜನರ ಸಂಗಗಳನು ತೊರೆದು ನುಡಿದು ನಡೆದರೆ

    ನಿನ್ನೊಳಗಿನ ಶ್ರೀರಾಮನೇ ಯಮನಾಗುವನು

    ಸೂಪರ್ ಸಾಲುಗಳು..

    ಅಭಿನಂದನೆಗಳು ಗಿರಿ

    ReplyDelete
    Replies
    1. ತುಂಬಾ ಧನ್ಯವಾದಗಳು ಶ್ರೀ ... ನಿಮ್ಮ ಪ್ರೋತ್ಸಾಹವೇ ನನಗೆ ಉತ್ಸಾಹ

      Delete