ಸಾಹಿತ್ಯ ಪ್ರೇಮಿಗಳೇ,
ಇಲ್ಲಿರುವ ಹಾಡುಗಳನ್ನು ನಾನು ಶ್ರೋತ್ರಿಸಿ ಉಲ್ಲೇಖಿಸಿದ್ದೇನೆ. ನಿಮಗೆ ಸೈ ಎನಿಸಿದರೆ ಜಾಹಿರಾಗಿಸಿ ,ಲೋಪವಿದ್ದರೆ ತಮ್ಮ ಅನಿಸಿಕೆಗಳನ್ನು ಎನಗೆ ರವಾನಿಸಿ
.......ಗಿರೀಶ, ಶಿವಮೊಗ್ಗ
ಗೋವಿಂದ ನಿನ್ನ ನಾಮವೇ ಚೆಂದ || ಪ || ಅಣುರೇಣುತೃಣಕಾಷ್ಟ ಪರಿಪೂರ್ಣ ಗೋವಿಂದ ನಿರ್ಮಲಾತ್ಮಕನಾಗಿ ಇರುವುದೇ ಆನಂದ || ೧ || ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ ಈ ಪರಿ ಮಹಿಮೆಯ ತಿಳಿಯುವುದಾನಂದ || ೨ || ಮಂಗಳಮಹಿಮ ಶ್ರೀ ಪುರಂದರ ವಿಠಲನ ಹಿಂಗದೆ ಭಜಿಸುತ ಇರುವುದೇ ಆನಂದ || ೩ ||
ಬಿಡುವೇನೇನಯ್ಯ ಹನುಮ, ಸುಮ್ಮನೆ ಬಿಡುವೇನೇನಯ್ಯ || ಪ || ಬಿಡುವೆನೇನೋ ಹನುಮ ನಿನ್ನ ಅಡಿಗಳಿಗೆ ಶಿರವ ಕಟ್ಟಿ ಒಡೆಯನಲ್ಲಿ ಜ್ಞಾನ ಭಕುತಿಯ ಕೊಡುವ ತನಕ ಸುಮ್ಮನೇ ನಿನ್ನ || ಅ.ಪ || ಹಸ್ತವನ್ನು ಎತ್ತಿದರೇನು ಹಾರಾಕಾಲನು ಇಟ್ಟರೇನು ಭೃತ್ಯನು ನಿನ್ನವನು ನಾನು ಹಸ್ತಿವರದನ ತೋರುವ ತನಕ || ೧ || ಹಲ್ಲುಮುಡಿಯ ಕಚ್ಚಿದರೇನು ಅಂಜುವೆನೇ ನಿನಗೆ ನಾನು ಫುಲ್ಲನಾಭನಲ್ಲಿ ಎನ್ನ ಮನಸ ನೀ ನಿಲ್ಲಿಸೊ ತನಕ || ೨ || ಡೊಂಕು ಮೋರೆ ಬಾಲವ ತಿದ್ದಿ ಹೂಂಕರಿಸಿದರೆ ಅಂಜುವನಲ್ಲ ಕಿಂಕರ ನಿನ್ನವನು ನಾನು ಪುರಂದರವಿಠಲನ ತೋರುವ ತನಕ || ೩ ||
ಇನ್ನು ದಯ ಬಾರದೆ ದಾಸನ ಮೇಲೆ || ಪ || ಪನ್ನಗ ಶಯನ ಶ್ರೀ ಪರಮ ಪುರುಷ || ಅ.ಪ || ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ ನಾನಾ ಯೋನಿಗಳಲ್ಲಿ ನಲಿದು ಹುಟ್ಟಿ ನಾನು ನನ್ನದು ಎಂಬ ನರಕದೊಳಗೆ ಬಿದ್ದು ನೀನೆ ಗತಿ ಎಂದು ನಂಬಿದ ದಾಸನ ಮೇಲೆ || ೧ || ಮನೋವಾಕ್ಕಾಯದಿಂದ ಮಾಡುವ ಕರ್ಮಗಳೆಲ್ಲ ದಾನವಾಂತಕ ನಿನಗೆ ದಾನವಿತ್ತೆ ಏನು ಮಾಡಿದರೇನು ಪ್ರಾಣ ನಿನ್ನದು ಸ್ವಾಮಿ ಶ್ರೀನಾಥ ಪುರಂದರ ವಿಠಲನ ದಾಸನ ಮೇಲೆ || ೨ ||
ಕಂಡೆನ ನಾ ಗೋವಿಂದನ || ಪ || ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ || ಅ.ಪ || ಕೇಶವ ನಾರಾಯಣ ಶ್ರೀ ಕೃಷ್ಣನ ವಾಸುದೇವ ಅಚ್ಯುತ ಅನಂತನ ಸಾಸಿರ ನಾಮದ ಶ್ರೀ ಹೃಷಿಕೇಶನ ಶೇಷಶಯನ ನಮ್ಮ ವಾಸುದೇವ ಸುತನ || ೧ || ಪುರುಷೋತ್ತಮ ನರಹರಿ ಶ್ರೀ ಕೃಷ್ಣನ ಶರಣಾಗತ ಜನ ರಕ್ಷಕನ ಕರುಣಾಕರ ನಮ್ಮ ಪುರಂದರವಿಠಲನ ನೆರೆ ನಂಬಿದೆನು ಬೇಲೂರ ಚೆನ್ನಿಗನ || ೨ ||
ದೃಷ್ಟಿ ನಿನ್ನ ಪಾದದಲ್ಲಿ ನೆಡೋ ಹಾಂಗೆ ಕೃಷ್ಣ || ಪ || ದುಷ್ಟ ಜನ ಸಂಗವನ್ನು ಬಿಡೋ ಹಾಂಗೆ ಕೆಟ್ಟ ಮಾತು ಕಿವಿಗೆ ಕೇಳಿಸದ್ಹಾಂಗೆ ಮನ ಕಟ್ಟಿಸಯ್ಯ ನಿನ್ನ ಪಾದ ಬಿಡದ್ಹಾಂಗೆ || ೧ || ದಿಟ್ಟನಾಗಿ ಕೈಯಾನೆತ್ತಿ ಕೊಡೊ ಹಾಂಗೆ ಕೃಷ್ಣ ನಿನ್ನ ಪೂಜೆಯನ್ನು ನಾ ಮಾಡೋ ಹಾಂಗೆ ಭ್ರಷ್ಟನಾಗಿ ನಾಲ್ವರೊಳು ತಿರುಗದ್ಹಾಂಗೆ ಶಿಷ್ಟ ಜನ ಸೇವೆಯನ್ನು ಮಾಡೋ ಹಾಂಗೆ || ೨ || ಹುಟ್ಟಿಸಿದ ತಾಯಿತಂದೆಯಲ್ಲೋ ನೀನು ಕೃಷ್ಣ ಹೊಟ್ಟೆಗಾಗಿ ದೈನ್ಯಪಡಲಾರೆ ನಾನು ಪಟ್ಟೆಪಟ್ಟಾವಳಿ ಬೇಡಲಿಲ್ಲ ನಾನು ಗುಟ್ಟು ಅಭಿಮಾನಗಳ ಕಾಯೋ ನೀನು || ೩ || ನಟ್ಟ ನಡು ನೀರೊಳಗೆ ಈಸರಾಲೆ ನಾ ಕಟ್ಟೆ ಸೇರಿಸಬೇಕಯ್ಯ ನೀನು ಬೆಟ್ಟದಂತ ಪಾಪಗಳ ಹೊತ್ತಿರುವೆ ನಾನು ಸುಟ್ಟು ಬಿಡು ಪುರಂದರ ವಿಠ್ಠಲ ನೀನು || ೪ ||
ಅತ್ತೆಮಾವಗಂಜಿಕೊಂಡು ನಡೆಯಬೇಕಮ್ಮ ಚಿತ್ತದೊಲ್ಲಭನ ಅಕ್ಕರೆಯನ್ನು ಪಡೆಯಬೇಕಮ್ಮ ಹೊತ್ತುಹೊತ್ತಿಗೆ ಮನೆಯ ಕೆಲಸ ಮಾಡಬೇಕಮ್ಮ ಹತ್ತು ಮಂದಿ ಒಪ್ಪುವ ಹಾಗೆ ನುಡಿಯಬೇಕಮ್ಮ || ೧ || ಕೊಟ್ಟು ಕೊಂಬುವ ನೆಂಟರಲ್ಲಿ ದ್ವೇಷ ಬೇಡಮ್ಮ ಅಟ್ಟು ಉಂಬುವ ಕಾಲದಲ್ಲಿ ಆಟ ಬೇಡಮ್ಮ ಹಟ್ಟಿ ಬಾಗಿಲಲ್ಲಿ ಬಂದು ನಿಲ್ಲ ಬೇಡಮ್ಮ ಕಟ್ಟಿ ಆಳುವ ಗಂಡನೊಡನೆ ಸಿಟ್ಟು ಬೇಡಮ್ಮ || ೨ || ನೆರೆಹೊರೆಯವರಿಗೆ ನ್ಯಾಯವನ್ನು ಹೇಳಬೇಡಮ್ಮ ಗರ್ವ ಕೋಪ ಮತ್ಸರವನ್ನು ಮಾಡಬೇಡಮ್ಮ ಪರರ ನಿಂದಿಪ ಹೆಂಗಳೊಡನೆ ಬೇರೆಯಬೇಡಮ್ಮ ಗುರು ಪುರಂದರ ವಿಠ್ಠಲನ್ನ ಮರೆಯಬೇಡಮ್ಮ || ೩ ||
ಹೆಂಡತಿ ಪ್ರಾಣ ಹಿಂಡುತಿ || ಪ || ದೊಡ್ಡ ಕೊಂಡ ಕೋತಿಯಂತೆ ಕುಣಿಕುಣಿಸುತ್ತಿ ||ಅ.ಪ || ಹೊತ್ತಾರೆ ಏಳುತ್ತಿ, ಹೊರಗೆ ತಿರುಗಾಡುತ್ತಿ ಹೊತ್ತು ಹೋಯಿತು, ಭತ್ಯ ತಾ ಎನ್ನುತ್ತಿ ಉತ್ತಮ ಗುರುಹಿರಿಯರ ಮಾತನ್ನು ಮೀರುತ್ತಿ ಮೃತ್ಯು ದೇವತೆಯಂತೆ ಮನೆಯೊಳಗಿರುತಿ || ೧ || ಇಲ್ಲದ್ದು ಬೇಡುತ್ತಿ, ಸುಳ್ಳನ್ನು ಮಾತಾಡುತ್ತಿ ಒಳ್ಳೆ ಊಟವನುಂಡು ಕುಳಿತಿರ್ಪೆನಂತಿ ಎಳ್ಳಿನಷ್ಟೂ ಕೆಲಸ ಮಾಡಲಾರೆನೆಂತಿ ಎಲ್ಲೆಲ್ಲಿ ತಲೆ ಎತ್ತದ ಹಾಗೆ ಮಾಡುತ್ತಿ || ೨ || ಹಿರಿಯತನಕೆ ಹೋಗುತ್ತಿ, ಗರುವಿಕೆ ಮಾಡುತ್ತಿ ನೆರೆಹೊರೆಯರ ಕೂಡ ಬಡಿದಾಡುತ್ತಿ ದೊರೆ ಸಿರಿಪುರಂದರವಿಠಲನ ಸ್ಮರಿಸದೆ ದುರಿತಕ್ಕೆ ಗುರಿಯಾಗಿ ನೀ ನಿಲ್ಲುತ್ತಿ || ೩ || ಕ್ಲಿಷ್ಟ ಪದಗಳ ಅರ್ಥ : ------------------ ಭತ್ಯ : allowance